(1928- ). ಚಲನಚಿತ್ರ ವಿತರಣೆ, ಪ್ರದರ್ಶನ ಹಾಗೂ ನಿರ್ಮಾಣ-ಈ ಮೂರೂ ಕ್ಷೇತ್ರಗಳಲ್ಲಿ ದುಡಿದ ಅಪಾರ ಅನುಭವಿ ಆರ್.ಲಕ್ಷ್ಮಣ್‍ರನ್ನು ಚಲನಚಿತ್ರ ಉದ್ದಿಮೆಗೆ ಸಂಬಂಧಪಟ್ಟ ನಿಯಮಾವಳಿಗಳು ಹಾಗೂ ಕಾನೂನುಗಳನ್ನು ಆಳವಾಗಿ ಅಧ್ಯಯನಮಾಡಿರುವ ನಡೆದಾಡುವ ಚಲನಚಿತ್ರ ಜಗತ್ತಿನ ವಿಶ್ವಕೋಶ ಅಥವಾ ರೆಡಿರೆಕನ್ನರ್ ಎಂದೇ ಕರೆಯಬಹುದು. 1928ರ ಆಗಸ್ಟ್ 28ರಂದು ಮೈಸೂರಿನಲ್ಲಿ ಜನನ.

ತಮ್ಮ ಹದಿನೇಳರ ಹರೆಯದಲ್ಲೇ-ಅಂದರೆ 1945ರ ವೇಳೆಗಾಗಲೇ ಚಲನಚಿತ್ರ ಪ್ರತಿನಿಧಿಯಾಗಿ ಕಾರ್ಯ ಆರಂಭಿಸಿದರು.  ಬನ್ನೂರು, ಮದ್ದೂರ್, ಚಿಂತಾಮಣಿ, ಶಿಡ್ಲಘಟ್ಟಗಳಲ್ಲಿ ಸಂಚಾರಿ ಚಿತ್ರಮಂದಿರ, ಹಾಗೂ ಚಿತ್ರಮಂದಿರಗಳನ್ನು ನಡೆಸಿದರು. ಬೆಂಗಳೂರಿನಲ್ಲಿ ಪಾಲುಗಾರಿಕೆಯಲ್ಲಿ ಚಲನಚಿತ್ರ ಹಂಚಿಕಾ ಸಂಸ್ಥೆಯನ್ನು ನಡೆಸಿದರು. 1950ರಲ್ಲಿ ಬೆಂಗಳೂರಿನ ದಂಡು ಪ್ರದೇಶದಲ್ಲಿನ ಅಪೇರಾ ಚಿತ್ರಮಂದಿರದ ವ್ಯವಸ್ಥಾಪಕರಾಗಿ ಪ್ರದರ್ಶನ ಕ್ಷೇತ್ರದಲ್ಲೂ ಕೃಷಿ ಆರಂಭಿಸಿದ ಇವರು ನಂತರ ಎವರೆಸ್ಟ್ ಚಿತ್ರಮಂದಿರದ ನಿರ್ವಾಹಕರಾದರು.

ಅನಂತರ ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿದ್ದ ಭಾರತ್‍ಚಿತ್ರಮಂದಿರದ ವ್ಯವಸ್ಥಾಪಕರಾದರು. ಆಗಲೇ ಕಾದಂಬರಿ ಸಾರ್ವಭೌಮ ಅ.ನ.ಕೃ, ಮ.ರಾಮಮೂರ್ತಿ, ನಟ ಡಾ|ರಾಜಕುಮಾರ್ ಇವರೊಂದಿಗೆ ಲಕ್ಷ್ಮಣ್ ಸಂಪರ್ಕ ಹಾಗೂ ಒಡನಾಟ. ಕನ್ನಡದ ಬಗ್ಗೆ ಅಭಿಮಾನದ ಜಾಗೃತಿ. 1960ರಿಂದ ಭಾರತ್ ಚಿತ್ರಮಂದಿರ ಸಂಪೂರ್ಣವಾಗಿ ಕನ್ನಡ ಚಿತ್ರಗಳಿಗೇ ಮೀಸಲಾಯಿತು.  ಈ ನಿರ್ಧಾರಕ್ಕೆ ಪ್ರೋತ್ಸಾಹಿಸಿ ಸಹಕರಿಸಿದವರು ಚಿತ್ರಮಂದಿರದ ಮಾಲೀಕರಾದ ಷಹಪಾಶಾ. ಈ ಸಂದರ್ಭದಲ್ಲಿಯೇ ಕನ್ನಡ ಚಿತ್ರ ಪ್ರೇಮಿಗಳ ಸಂಘದ ರೂವಾರಿ ಕೆ.ಎ.ಗೋಪಾಲ್ ಇವರು ಜೊತೆಗೂಡಿದರು. ಕೃಷಿ ಇಲಾಖೆಯ ಉದ್ಯೋಗಿಯಾಗಿದ್ದ ಗೋಪಾಲ್ ಮತ್ತು ಲಕ್ಷ್ಮಣ್‍ರ ಜೋಡಿ ಡಾ||ರಾಜಕುಮಾರ್ ಅವರು ತಮ್ಮ ಅಭಿನಯದ ನೂರನೆಯ ಚಿತ್ರ ಪೂರೈಸಿದಾಗ ಬೆಂಗಳೂರಿನಲ್ಲಿ ಬೃಹತ್ ಸಮಾರಂಭ ವೇರ್ಪಡಿಸಿ ಗೌರವಿಸಿದರು, ರಾಜ್ ಅಭಿನಯದ ತುಣುಕುಗಳ ಜೊತೆಗೆ ಅವರನ್ನು ಪರಿಚಯಿಸುವ ’ನಟಸಾರ್ವಭೌಮ’ ವ್ಯಕ್ತಿ ಚಿತ್ರವನ್ನು ಆರೂರು ಪಟ್ಟಾಭಿ ಅವರ ನಿರ್ದೇಶನದಲ್ಲಿ, ಭಾರತ್ ಎಂಟರ್‍ಪ್ರೈಸಸ್ ಅವರಿಗಾಗಿ ನಿರ್ಮಿಸಿಕೊಟ್ಟರು. ಅದೇ ಲಾಂಛನದಡಿಯಲ್ಲಿ ಎನ್.ಲಕ್ಷ್ಮೀನಾರಾಯಣ್ ನಿರ್ದೇಶನದಲ್ಲಿ, ಚದುರಂಗರ ಕೃತಿ ’ಉಯ್ಯಾಲೆ’ ಹಾಗೂ ವೈ.ಆರ್.ಸ್ವಾಮಿ ಅವರ ದಿಗ್ದರ್ಶನದಲ್ಲಿ ’ದೇವರ ಮಕ್ಕಳು’ ಚಿತ್ರಗಳನ್ನು ತಯಾರಿಸಿದರು.

ಗೋಪಾಲ್, ಲಕ್ಷ್ಮಣ್‍ರ ಜೊತೆಗೂಡಿ ಶ್ರೀನಿಧಿ ಪ್ರೊಡಕ್ಷನ್ಸ್ ಸ್ಥಾಪಿಸಿ ಸಿದ್ಧಲಿಂಗಯ್ಯನವರ ನಿರ್ದೇಶನದಲ್ಲಿ, ಟಿ.ಕೆ.ರಾಮರಾಯರ ಕಾದಂಬರಿ ಆಧಾರಿತ `ಬಂಗಾರದ ಮನುಷ್ಯ' ಚಿತ್ರವನ್ನು ನಿರ್ಮಿಸಿ ಇತಿಹಾಸ ಸೃಷ್ಟಿಸಿದರು. ಈ ಚಿತ್ರ ಬೆಂಗಳೂರಿನ ಕೆಂಪೇಗೌಡ ರಸ್ತೆಯ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಸತತ ಎರಡು ವರ್ಷಗಳ ದೀರ್ಘಕಾಲ ಪ್ರದರ್ಶಿತವಾಗಿ ಸರ್ವಕಾಲೀನ ದಾಖಲೆಯನ್ನೇ ಸ್ಥಾಪಿಸಿತು. ಇದುವರೆಗೂ ಆ ದಾಖಲೆಯನ್ನು ಮುರಿಯಲು, ಮುಟ್ಟಲು ಬೇರೆಯಾವ ಕನ್ನಡ ಚಿತ್ರಕ್ಕೂ ಸಾಧ್ಯವಾಗಿಲ್ಲ ಎಂಬುದು ಗಮನಾರ್ಹ. ವೈ.ಆರ್.ಸ್ವಾಮಿ ಅವರ ನಿರ್ದೇಶನದಲ್ಲಿ ಈ ಜೋಡಿ ತಯಾರಿಸಿದ `ಭಲೇ ಹುಚ್ಚ' ಶತದಿನೋತ್ಸವ ಆಚರಿಸಿತು. ಕೆ.ಎ.ಗೋಪಾಲ್‍ರ ಅಕಾಲ ಮೃತ್ಯುವಾಗುವವರೆವಿಗೂ ಈ ಜೋಡಿ ಹಲವು ಯಶಸ್ವೀ ಚಿತ್ರಗಳನ್ನು ನಿರ್ಮಿಸಿತು. ಅನಂತರ ಲಕ್ಷ್ಮಣ್ ಅವರು ನವನಿಧಿ ಲಾಂಛನದಲ್ಲಿ ಕೆಲವು ಚಿತ್ರಗಳನ್ನು ತಯಾರಿಸಿ ಯಶಸ್ವಿಯಾದರು. ಭಾಗ್ಯಜ್ಯೋತಿ, ಬೆಸುಗೆ, ಶುಭಮಂಗಳ, ಜಿಮ್ಮಿಗಲ್ಲು, ಹುಲಿ ಹೆಜ್ಜೆ, ಬಂಧ ಮುಕ್ತಿ ಬಾಳು ಬಂಗಾರ ಮುಂತಾದ ಚಿತ್ರಗಳನ್ನು ಲಕ್ಷಣ್ ನಿರ್ಮಿಸಿದರು. ಕೆಲವು ಚಿತ್ರಗಳು ಗೋಪಾಲ್ ಮತ್ತಿತರರ ಪಾಲುಗಾರಿಕೆಯಲ್ಲಿ ನಿರ್ಮಾಣವಾಗಿವೆ.

ಲಕ್ಷ್ಮಣ್ ಚಲನಚಿತ್ರ ಪತ್ರಕರ್ತರೂ ಕೂಡ, 1963ರಲ್ಲಿ `ಚಿತ್ರಲೇಖ' ಸಿನಿಮಾ ಮಾಸಪತ್ರಿಕೆಯನ್ನು ಆರಂಭಿಸಿ ಕೆಲ ವರ್ಷಗಳ ಕಾಲ ಪತ್ರಿಕೆಯನ್ನು ನಡೆಸಿದರು. ಕನ್ನಡ ಚಳವಳಿ, ಮತ್ತು ಡಬ್ಬಿಂಗ್ ಚಿತ್ರಗಳ ವಿರುದ್ಧ ಬೃಹತ್ ಹೋರಾಟದ ಮುಂಚೂಣಿಯಲ್ಲಿ ಇದ್ದ ಲಕ್ಷ್ಮಣ್ ಕರ್ನಾಟಕದಲ್ಲಿ ಆ ಪಿಡುಗು ಮತ್ತೆ  ತಲೆಯೆತ್ತದಂತೆ ಮಾಡುವಲ್ಲಿ ಯಶಸ್ವಿ ಆದರು. ಹಲವು ಹೊರರಾಷ್ಟ್ರಗಳಲ್ಲಿನ ಚಲನ ಚಿತ್ರೋತ್ಸವಗಳಲ್ಲಿ ಭಾಗವಹಿಸಿದ್ದಾರೆ. ಲಕ್ಷ್ಮಣ್, ಭಾರತದಲ್ಲಿನ ಅಂತರರಾಷ್ಟ್ರೀಯ ಚಿತ್ರೋತ್ಸವಗಳು ಎಲ್ಲೇ ಜರುಗಿದರೂ ಉತ್ಸಾಹದಿಂದ ಭಾಗವಹಿಸಿದ್ದಾರೆ.

ಕರ್ನಾಟಕ ಚಲನಚಿತ್ರ ಮಂಡಳಿಯಲ್ಲಿ ಗೌರವ ಕಾರ್ಯದರ್ಶಿಗಳಾಗಿ, ನಂತರ ಎರಡು ಬಾರಿ ಅಧ್ಯಕ್ಷರೂ ಆಗಿದ್ದ ಇವರು ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ರಾಷ್ಟ್ರೀಯ ಮಟ್ಟದ ಫಿಲಂ ಪ್ರೊಡ್ಯೂಸರ್ ಗಿಲ್ಡ್ ಆಫ್ ಇಂಡಿಯಾ ಸಂಸ್ಥೆಯಲ್ಲಿಯೂ ಕೆಲಸ ಮಾಡಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಚಲನಚಿತ್ರಗಳಿಗೆ ಸಂಬಂಧಿಸಿದ ಪ್ರಶಸ್ತಿ ಸಲಹಾಸಮಿತಿ, ಪನೋರಮಾ ಆಯ್ಕೆ ಸಮಿತಿ, ಸೆನ್ಸಾರ್ ಮಂಡಳಿ, ಗುಣಮಟ್ಟದ ಆಧಾರಿತ ಸಹಾಯಧನ ಸಲಹಾಸಮಿತಿಗಳಂತಹ ಅನೇಕ ಸಮಿತಿಗಳಲ್ಲಿ ಸದಸ್ಯರಾಗಿ ದುಡಿದು ಕನ್ನಡ ಚಿತ್ರಗಳ ಹಿತ ಸಾಧನೆಕಾರ್ಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು. ಕರ್ನಾಟಕದಲ್ಲಿ ಚಲನಚಿತ್ರ ಸಹಕಾರ ಸಂಘದ ರೂವಾರಿಯೂ ಹೌದು. ಆರ್.ಲಕ್ಷ್ಮಣ್ ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ.
ಇವರ ಪುತ್ರ ನಾಗರಾಜ್-ನಾಗಣ್ಣ ಪ್ರವರ್ಧಮಾನಕ್ಕೆ ಬರುತ್ತಿರುವ ಕನ್ನಡ ನಿರ್ದೇಶಕ, ಚಲನಚಿತ್ರೋದ್ಯಮದ ಬಗ್ಗೆ ಅಳವಾದ ಅನುಭವ, ಚಲನಚಿತ್ರಗಳಿಗೆ ಸಂಬಂಧಿಸಿದ ಕಾನೂನು ಹಾಗೂ ನಿಯಮಗಳ ಬಗ್ಗೆ ಅಪಾರ ಪರಿಣತೆ ಇರುವ ಚಿತ್ರೋದ್ದಿಮೆಯ ಏಕೈಕ ವ್ಯಕ್ತಿ ಎನ್ನಬಹುದಾದ 1996ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿದ ಕರ್ನಾಟಕ ರಾಜ್ಯಸರ್ಕಾರ ಇವರಿಗೆ ಕನ್ನಡ ಚಿತ್ರೋದ್ಯಮಕ್ಕೆ ಇವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ 1995-96ನೇ ಸಾಲಿನ ``ಡಾಕ್ಟರ್ ರಾಜಕುಮಾರ್ ಪ್ರಶಸ್ತಿ''ಯನ್ನು ನೀಡಿ ಪುರಸ್ಕರಿಸಿದೆ.
						
(ಶ್ರಿಕೃಪಾ; ಎ.ಎನ್.ಪ್ರಹ್ಲಾದ್‍ರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ